ಪೋರ್ಕಳಮ್
	ಕೇರಳದ ತ್ರಿಚೂರು ಜಿಲ್ಲೆಯ ತಲ್ಲವಲ್ಲಿ ತಾಲ್ಲೂಕಿನಲ್ಲಿ ಕುನ್ನಂಕುಲಮ್‍ನಿಂದ 4 ಕಿ.ಮೀ. ಉತ್ತರಕ್ಕಿರುವ ಬೃಹತ್ ಶಿಲಾಸಮಾಧಿಗಳ ನೆಲೆ ಪೋರ್ಕಳಮ್ ಎಂದರೆ ರಣರಂಗ ಎಂದರ್ಥ. ಸಮುದ್ರ ಮಟ್ಟದಿಂದ ಕೇವಲ 15 ಮೀ. ಎತ್ತರದಲ್ಲಿರುವ ಈ ನೆಲೆ ಇಳಿಜಾರಾದ ಮುರಗಲ್ಲಿನಿಂದ ಆವೃತವಾದ ಸ್ಥಳದಲ್ಲಿದೆ. 

	ಪೋರ್ಕಳಮ್‍ನಲ್ಲಿ ಬಂಡೆಯಲ್ಲಿ ಕೊರೆದ ಗುಹಾಸಮಾಧಿಗಳು, ಡಾಲ್ಡೆನ್‍ಗಳು, ಕಿಂಡಿಯುಳ್ಳ ಶವಸಂಪುಟಗಳು (ಸಿಸ್ಟ್) ಮತ್ತು ಕುಂಭಸಮಾಧಿಗಳು ಇವೆ.

	1948 ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಬಿ.ಕೆ. ಥಾಪರರು ಬೃಹತ್ ಶಿಲಾ ಸಮಾಧಿಗಳಲ್ಲೊಂದಾದ ಕುಂಭ ಸಮಾಧಿಯ ಉತ್ಖನನ ಮಾಡಿದರು. ಸಮಾಧಿಯ ಸುತ್ತ ಸುಮಾರು 5 ಮೀ. ವ್ಯಾಸದ ವೃತ್ತಾಕಾರದಲ್ಲಿ ಕಲ್ಲುಗಳನ್ನು ಜೋಡಿಸಲಾಗಿತ್ತು. ಮಧ್ಯದಲ್ಲಿ ಚಪ್ಪಟೆಯಾದ ಮುಚ್ಚಳಕಲ್ಲು ಇತ್ತು. ಉತ್ಖನನದಲ್ಲಿ ಒಂದು ಮೀಟರ್ ವ್ಯಾಸದ ಮತ್ತು ಒಂದೂವರೆ ಮೀಟರ್ ಆಳವಾದ ಸ್ತಂಭಾಕಾರದ ಒಂದು ತಗ್ಗು ಇದ್ದದ್ದು ಗೊತ್ತಾಯಿತು. ಮುಂದೆ ತಗ್ಗಿನ ತಳಭಾಗವನ್ನು 23 ಸೆಂ.ಮೀ. ಆಳದವರೆಗೆ ಶಂಕ್ವಾಕೃತಿಯಲ್ಲಿ ಮುರಗಲ್ಲಿನಲ್ಲಿ ಅಗೆಯಲಾಗಿತ್ತು. ತಗ್ಗಿನ ತಳಭಾಗದಲ್ಲಿ 95 ಸೆಂ.ಮೀ. ಎತ್ತರದ ಕುಂಭವಿತ್ತು. ಕುಂಭದಲ್ಲಿ 7 ಮಡಕೆಗಳು ಕಬ್ಬಿಣದ 3 ಉಪಕರಣಗಳು ಮತ್ತು 48 ಮಣಿಗಳು ದೊರೆತುವು. ಮಧ್ಯದಲ್ಲಿದ್ದ ಮಡಕೆಯಲ್ಲಿ ಅಸ್ಥಿಗಳಿದ್ದು ಮಡಕೆಯೊಂದಿಗೆ ಜಜ್ಜಿ ಹೋಗಿದ್ದುವು. ಕಬ್ಬಿಣದ ಉಪಕರಣಗಳ ಪೈಕಿ ಒಂದು ಚೂರಿಯಿತ್ತು. ಮಣಿಗಳ ಪೈಕಿ 41 ಕೆತ್ತನೆ ಮಾಡಿದ ಕಾರ್ನೆಲಿಯನ್ ಕಲ್ಲಿನವು. 6 ಅಸ್ಪಷ್ಟ ಲೋಹದವು ಮತ್ತು ಒಂದು ಮಣ್ಣಿನದು.

	ಕುಂಭವನ್ನು ಮುಚ್ಚಳದಿಂದ ಮುಚ್ಚಲಾಗಿತ್ತು. ಮುಚ್ಚಳದವರೆಗೆ ತಗ್ಗನ್ನು ತುಂಬಲಾಗಿತ್ತು. ಮುಚ್ಚಳದ ಮೇಲಿನ ಭಾಗದಲ್ಲಿ 18 ಮಡಕೆಗಳನ್ನು ಜೋಡಿಸಲಾಗಿತ್ತು. ಇವುಗಳ ಮೇಲೆ ತಗ್ಗನ್ನು ನೆಲದ ಮಟ್ಟದವರೆಗೆ ಹರಳು ಮಿಶ್ರಿತ ಸಡಿಲು ಮಣ್ಣಿನಿಂದ ತುಂಬಿ ಮೇಲೆ ಚಿಕ್ಕ ದಿಬ್ಬವನ್ನಾಗಿ ಮಾಡಿ ಮುಚ್ಚಳ ಕಲ್ಲಿನಿಂದ ಮುಚ್ಚಲಾಗಿತ್ತು.

	ಮಡಕೆಗಳಲ್ಲಿ ಕಪ್ಪು, ಕೆಂಪುಲೇಪಿತ, ಕಪ್ಪು ಕೆಂಪು-ಹೀಗೆ ಮೂರು ವಿಧಗಳಿದ್ದವು. ಕಪ್ಪು ಮೃತ್‍ಪಾತ್ರೆಗಳಲ್ಲಿ ಮುಚ್ಚಳಗಳು, ವರ್ತುಲಾಕಾರದ ಕಂಬಗಳು ಮತ್ತು ಆಳವಾದ ಬಟ್ಟಲುಗಳಿದ್ದವು. ಕೆಂಪು ಬಣ್ಣದಲ್ಲಿ ನಾಲ್ಕು ಕಾಲುಗಳುಳ್ಳ ಮಡಕೆಗಳು, ಸಾಮಾನ್ಯ ಮಡಕೆ, ಉದ್ದನೆಯ ತಳವುಳ್ಳ ಕುಂಭ ಮತ್ತು ಅದರ ಮುಚ್ಚಳ ಇದ್ದುವು. ಕಪ್ಪು ಮತ್ತು ಕೆಂಪು ಮೃತ್‍ಪಾತ್ರೆಗಳಲ್ಲಿ ಆಳವಾದ ಬಟ್ಟಲುತಟ್ಟೆ ಮತ್ತು ಮಡಕೆಗಳು ಇದ್ದುವು. 

	ತಯಾರಿಸುವ ವಿಧಾನ ಮತ್ತು ಗಾತ್ರದಲ್ಲಿ ಈ ಮೃತ್‍ಪಾತ್ರೆ ಬ್ರಾಹ್ಮಗಿರಿ ಮತ್ತು ಇತರ ಬೃಹತ್ ಶಿಲಾಸಮಾಧಿಗಳಲ್ಲಿಯವುಗಳಂತಿವೆ. ಆದರೆ, ತಟ್ಟೆ ಮತ್ತು ಬಟ್ಟಲುಗಳನ್ನು ಹೊರತು ಉಳಿದವುಗಳ ಆಕಾರದಲ್ಲಿ ವೈವಿಧ್ಯ ಇದೆ.

	ಪೋರ್ಕಳಮ್ ಕುಂಭ ಸಮಾಧಿಗಳು ಕ್ರಿ. ಪೂ. 3 ನೆಯ ಶತಮಾನದಿಂದ ಕ್ರಿ.ಶ. 1 ನೆಯ ಶತಮಾನದ ವರೆಗಿನ ಕಾಲದವಾಗಿವೆ.
(ಸಿ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ